1. ಕುಟುಂಬ ಎಂದರೇನು?
ಒಂದು ಕುಟುಂಬವೆಂಬುದು ನಿವಾಸಿ ನಿರ್ಧರಿಸಿದಂತೆ. ಆದರೆ, ಗಂಡ, ಹೆಂಡತಿ ಹಾಗು ಅವಿವಾಹಿತ ಮಕ್ಕಳನ್ನು ಕುಟುಂಬ ವ್ಯವಸ್ಥೆಗೆ ನೋಂದಾಯಿಸಲು ಕನಿಷ್ಟ ಸದಸ್ಯರೆಂದು ಪರಿಗಣಿಸಲಾಗಿದೆ.
2. ಒಂದು ವೇಳೆ ನನ್ನ ಕುಟುಂಬವು ಕುಟುಂಬದ ಕನಿಷ್ಟಸಾಧ್ಯ ಪರಿಭಾಷೆಯನ್ನು ಹೊಂದಿಲ್ಲದಿದ್ದಲ್ಲಿ ಪರಿಹಾರವೇನು?
ಕುಟುಂಬ ವ್ಯವಸ್ಥೆಯು ಕನಿಷ್ಟಸಾಧ್ಯ ಸಂಖ್ಯೆಯ ಸದಸ್ಯರನ್ನು ಹೊಂದಿಲ್ಲದ ಹೊರತಾಗಿಯೂ ಕುಟುಂಬವನ್ನು ರಚಿಸಲು ಅವಕಾಶ ಕಲ್ಪಿಸುತ್ತದೆ. ಅಂತಹ ಕುಟುಂಬ ರಚನೆಗೆ ಅನುಮತಿಸಲಾದ ವಿನಾಯಿತಿಗಳು ಈ ಕೆಳಕಂಡಂತಿವೆ.
i. ಏಕ ಸದಸ್ಯರಿರುವ ಕುಟುಂಬ: ವಿಧವೆ/ವಿಧವ/ನಿರ್ಗತಿಕರು/ಅವಿವಾಹಿತ ಅನಾಥರು(ಗಳು)
ii. ಅವಿವಾಹಿತ ಸಹೋದರ/ಸಹೋದರಿ ವಿವಾಹಿತ ಸಹೋದರ/ಸಹೋದರಿಯ ಜೊತೆ ವಾಸವಿದ್ದು, ತಂದೆ-ತಾಯಿ ಮರಣ ಹೊಂದಿರುತ್ತಾರೆ.
iii. ಅವಿವಾಹಿತ ಸಹೋದರ/ಸಹೋದರಿಯರು ಜೊತೆಯಾಗಿ ವಾಸವಿದ್ದು, ತಂದೆ-ತಾಯಿ ಮರಣ ಹೊಂದಿರುತ್ತಾರೆ.
3. ಕುಟುಂಬ ಗುರುತಿನ ಸಂಖ್ಯೆಯಿಂದ ಆಗುವ ಅನುಕೂಲಗಳೇನು?
ಸರ್ಕಾರದ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಕುಟುಂಬ ಗುರುತಿನ ಸಂಖ್ಯೆ ಸಹಕಾರಿಯಾಗಲಿದೆ. ಪ್ರತಿ ಬಾರಿ ಅರ್ಜಿ ಸಲ್ಲಿಸುವಾಗ ಅವಶ್ಯವಿರುವ ದಾಖಲಾತಿಗಳನ್ನು ಅಪ್ಲೋಡ್ ಮಾಡುವ ಅಗತ್ಯವಿರುವುದಿಲ್ಲ.
4. ಕುಟುಂಬ ಗುರುತಿನ ಸಂಖ್ಯೆ ಪಡೆಯಲು ಯಾರು ಅರ್ಹರು?
ಕರ್ನಾಟಕದಲ್ಲಿರುವ ಎಲ್ಲಾ ನಿವಾಸಿಗಳು ಕುಟುಂಬ ಗುರುತಿನ ಸಂಖ್ಯೆ ನೋಂದಣಿ ಮಾಡಲು ಅರ್ಹರಾಗಿರುತ್ತಾರೆ.
5. ಕುಟುಂಬಕ್ಕೆ ಅವಿವಾಹಿತರಾಗಿದ್ದು, ವಯಸ್ಕರಾಗಿರುವ ಮಕ್ಕಳನ್ನು ಕಡ್ಡಾಯವಾಗಿ ಸೇರಿಸಬೇಕೆ?
ಹೌದು, ಅಪ್ರಾಪ್ತ ಅಥವಾ ಪ್ರಾಪ್ತ ವಯಸ್ಕರಾಗಿರುವ ಎಲ್ಲ ಅವಿವಾಹಿತ ಮಕ್ಕಳನ್ನು ಕಡ್ಡಾಯವಾಗಿ ಸೇರಿಸಬೇಕು.
6. ಮಕ್ಕಳಿಲ್ಲದ ದಂಪತಿಗಳು ಕುಟುಂಬ ವ್ಯವಸ್ಥೆಯಲ್ಲಿ ನೋಂದಣಿ ಮಾಡಬಹುದೇ?
ಹೌದು, ಮಕ್ಕಳಿಲ್ಲದೆ ಇರುವ ಗಂಡ ಹಾಗೂ ಹೆಂಡತಿ ಇಬ್ಬರೆ ಇದ್ದರು ಸಹ ನೋಂದಣಿ ಮಾಡಬಹುದು.
7. ಮದುವೆಯಾಗಿಲ್ಲದ ಸಹೋದರ ಅಥವಾ ಸಹೋದರಿಯರು ಇರುವ ಕುಟುಂಬ ನೋಂದಣಿ ಮಾಡಬಹುದೇ?
ಹೌದು, ಕುಟುಂಬದಲ್ಲಿ ಎಲ್ಲರೂ ಅವಿವಾಹಿತರಾಗಿದ್ದು, ತಂದೆ ಹಾಗೂ ತಾಯಿ ಮರಣ ಹೊಂದಿದ ಸಂದರ್ಭದಲ್ಲಿ ನೋಂದಣಿ ಮಾಡಬಹುದು. ಆದರೆ ಯಾರಾದರೂ ಒಬ್ಬರು 18 ವರ್ಷ ಮೇಲ್ಪಟ್ಟವರಾಗಿರಬೇಕು.
8. ನಿರ್ಗತಿಕರು ಕುಟುಂಬ ಗುರುತಿನ ಸಂಖ್ಯೆಗಾಗಿ ನೋಂದಣಿ ಮಾಡಬಹುದೇ?
ಹೌದು, ಮಾಡಬಹುದು.
9. ಕುಟುಂಬ ವ್ಯವಸ್ಥೆಯಲ್ಲಿ ನನ್ನ ಕುಟುಂಬವನ್ನು ಹೇಗೆ ದಾಖಲಿಸುವುದು ?
ವೈಯಕ್ತಿಕ ಮೊಬೈಲ್ ಹಾಗೂ ಗಣಕಯಂತ್ರ ಬಳಸಿ ಸ್ವತಃ ನೀವೇ ನೋಂದಣಿ ಮಾಡಿಕೊಳ್ಳಬಹುದು.
10. ಅರ್ಜಿ ಸಲ್ಲಿಸಲು ನಿಗದಿ ಪಡಿಸಿರುವ ಶುಲ್ಕ ಎಷ್ಟು?
ಯಾವುದೇ ಶುಲ್ಕವನ್ನು ನಿಗದಿಪಡಿಸಲಾಗಿಲ್ಲ.
11. ಕುಟುಂಬ ಗುರುತಿನ ಸಂಖ್ಯೆ ನೋಂದಣಿ ಮಾಡಿಸಲು ಬೇಕಾದ ದಾಖಲಾತಿಗಳು ಯಾವುವು?
ಅರ್ಜಿ ಸಲ್ಲಿಸುವ ವೇಳೆ ಕುಟುಂಬದ ಎಲ್ಲ ಸದಸ್ಯರ ಆಧಾರ್ ಸಂಖ್ಯೆ ಅವಶ್ಯಕ. ವೈವಾಹಿಕ ಸ್ಥಿತಿಗಾಗಿ ವಿವಾಹ ನೋಂದಣಿ ಪ್ರಮಾಣ ಪತ್ರ ಹಾಗೂ ಜನ್ಮ ದಿನಾಂಕ ಖಚಿತಪಡಿಸಲು ಸದಸ್ಯರ ಜನನ ಪ್ರಮಾಣ ಪತ್ರ/ಎಸ್. ಎಸ್. ಎಲ್. ಸಿ ಅಂಕಪಟ್ಟಿ , ಇವುಗಳು ಐಚ್ಛಿಕ ದಾಖಲೆಗಳಾಗಿವೆ.
12. ಕುಟುಂಬ ಗುರುತಿನ ಸಂಖ್ಯೆ ಪಡೆಯಲು ಅರ್ಜಿ ಸಲ್ಲಿಸುವ ವಿಧಾನ?
ಕುಟುಂಬ ಗುರುತಿನ ಸಂಖ್ಯೆ ಪಡೆಯಲು ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಸರ್ಕಾರದ ಸುತ್ತೋಲೆ ಸಂಖ್ಯೆ : ಸಿಆಸುಇ 47 ಪಿಆರ್ಜೆ 2021, ದಿನಾಂಕ : 11/10/2021 ರಲ್ಲಿ ವಿವರಿಸಲಾಗಿದೆ. ಸುತ್ತೋಲೆಯನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.
13. ಯಾರನ್ನು ಏಕ ಸಂಪರ್ಕ ವ್ಯಕ್ತಿ(SPOC) ಎಂದು ಘೋಷಿಸಬಹುದು?
ಕುಟುಂಬದಲ್ಲಿ 18 ವರ್ಷಕ್ಕೂ ಮೇಲ್ಪಟ್ಟ ವಯೋಮಾನದ ಯಾವುದೇ ಸದಸ್ಯರನ್ನು ಏಕ ಸಂಪರ್ಕ ವ್ಯಕ್ತಿ ಎಂದು ಘೋಷಿಸಬಹುದು.
14. ಅರ್ಜಿದಾರನ ಆಧಾರ್ನಲ್ಲಿರುವ ಮೊಬೈಲ್ ಸಂಖ್ಯೆ ಪ್ರಚಲಿತದಲ್ಲಿರದಿದ್ದರೆ ಏನು ಮಾಡಬೇಕು?
ಆಧಾರ್ ಸಂಖ್ಯೆಗೆ ಲಿಂಕ್ ಆಗಿರುವ ಮೊಬೈಲ್ಗೆ OTP ಬರುವುದರಿಂದ ಮೊಬೈಲ್ ಸಂಖ್ಯೆ ಪ್ರಚಲಿತದಲ್ಲಿರಬೇಕು. ಒಂದು ವೇಳೆ ಮೊಬೈಲ್ ಸಂಖ್ಯೆ ಪ್ರಚಲಿದಲ್ಲಿರದಿದ್ದರೆ, ಅರ್ಜಿದಾರನು ಆಧಾರ್ ಕೇಂದ್ರ ಅಥವಾ ಅಂಚೆ ಕಚೇರಿಗೆ ಭೇಟಿ ನೀಡಿ ಆಧಾರ್ ನಲ್ಲಿ ಮೊಬೈಲ್ ಸಂಖ್ಯೆಯನ್ನು ಇಂದೀಕರಿಸುವುದು. ನಿಮ್ಮ ಹತ್ತಿರದ ಆಧಾರ್ ಕೇಂದ್ರ ತಿಳಿಯಲು ಇಲ್ಲಿ ಕ್ಲಿಕ್ಕಿಸಿ.
15. ವಿಳಾಸ ಬದಲಾಯಿಸಲು ಯಾವ ದಾಖಲಾತಿ ನೀಡಬೇಕು?
ಆಧಾರ್ ನಲ್ಲಿರುವ ವಿಳಾಸವನ್ನು ಕುಟುಂಬ ನೋಂದಣಿ ಸಮಯ ಉಪಯೋಗಿಸಲಾಗುವುದು. ಆಧಾರ್ ನಲ್ಲಿ ಬದಲಾಯಿಸದೇ ಕುಟುಂಬ ಗುರುತಿನ ಸಂಖ್ಯೆಯಲ್ಲಿ ಬದಲಾವಣೆ ಸಾಧ್ಯವಿಲ್ಲ.
16. ಅರ್ಜಿಯನ್ನು ಸಲ್ಲಿಸಿದ ಮೇಲೆ ಯಾವ ಅಧಿಕಾರಿಯನ್ನು ಸಂಪರ್ಕಿಸಬೇಕು?
ಗ್ರಾಮೀಣ ಪ್ರದೇಶದಲ್ಲಿ ಪಂಚಾಯತ್ ಅಭಿವೃದ್ದಿ ಅಧಿಕಾರಿ, ನಗರ ಪ್ರದೇಶದಲ್ಲಿ ಕಂದಾಯ ಅಧಿಕಾರಿಯನ್ನು ಸಂಪರ್ಕಿಸಬೇಕು.
17. ಭೌತಿಕ ಪರಿಶೀಲನೆ ಸಂದರ್ಭದಲ್ಲಿ ಯಾವ ದಾಖಲೆಗಳನ್ನು ಹಾಜರು ಪಡಿಸಬೇಕು?
ನೋಂದಣಿ ಸಂದರ್ಭದಲ್ಲಿ ನೀಡಿರುವ ಎಲ್ಲಾ ದಾಖಲೆಗಳನ್ನು ಹಾಗೂ ಪರಿಶೀಲನಾಧಿಕಾರಿ ಕೇಳುವ ಇನ್ನಿತರ ದಾಖಲೆಗಳನ್ನು ಭೌತಿಕ ಪರಿಶೀಲನೆ ಸಮಯದಲ್ಲಿ ಹಾಜರು ಪಡಿಸಬೇಕಾಗುತ್ತದೆ.